ತಣ್ನೀರುಬಾವಿಯಲ್ಲಿ ಒಂದು ಸಂಜೆ...
ಅದನ್ನೇ ನೋಡುತ್ತಾ ಅದೆಷ್ಟೋ ಮಂದಿ ಮರಳ ದಂಡೆಯಲ್ಲಿ ಕೂತು ತಮ್ಮ ಏಕಾಂಗಿತನವನ್ನು ಕಳೆಯುತಿದ್ದರು.. ತುಟಿಪಿಟಿಕೆನ್ನದೆ, ಎವೆಯಿಕ್ಕದೆ ತದೇಕಚಿತ್ತದಿಂದ ಈ ಅಪೂರ್ವ ಕ್ಷಣವನ್ನು ಆಸ್ವಾದಿಸುತ್ತಿದ್ದರು. ಅಲ್ಲಲ್ಲಿ ಚದುರಿ ಹೋದಂತೆ ಹಲವಾರು ಪ್ರೇಮಿಗಳು ತಮ್ಮ ಪ್ರಿಯತಮೆಯ ಸುತ್ತ ತಮ್ಮ ತೋಳುಗಳನ್ನು ಬಳಸಿ ಅದೇನೋ ಪಿಸುಗುಟ್ಟುತಿದ್ದಾರೆ.. ಕೆಲವಾರು ಹೆಂಗಸರು ಅಂದ ಚೆಂದದ ಬಟ್ಟೆಗಳನ್ನು ತೊಟ್ಟು ತಮ್ಮ ಒರಗೆಯವರೋಟ್ಟಿಗೆ, ಗೆಳತಿಯರೊಟ್ಟಿಗೆ ಸಮುದ್ರದ ಆರ್ಭಟಕ್ಕೆ ಪ್ರತಿಸ್ಪರ್ಧಿ ಎನ್ನುವಂತೆ ಮಾತಿನಲ್ಲಿ ತಲ್ಲೀನರಾದ್ದರೆ, ಅವರ ಮಕ್ಕಳೋ ಮನೆಯಿಂದ ಹೊತ್ತು ತಂದ ಆಟಿಕೆಗಳನ್ನು ಕೂಡಿ ಹಾಕಿ ಆಟವಾಡುತಿದ್ದರೆ, ಮತ್ತೆ ಕೆಲವರು ತಮ್ಮ ಗಾಳಿಪಟವನ್ನು ಮೇಲೆ ಆಗಸಕ್ಕೆ ಹಾರಿಸುವ ಪ್ರಯತ್ನದಲ್ಲಿದ್ದಾರೆ.. ಒಬ್ಬ ಹುಡುಗನ ಗಾಳಿಪಟ ಮಾತ್ರ ಮೇಲೆ ಹಕ್ಕಿಗಳ ಮಧ್ಯೆ ಸ್ಠಾನ ಗಿಟ್ಟಿಸಿಕೊಂಡು ಹಾರುತ್ತಿತ್ತು, ಅವ ಅದನ್ನು ಸಂತೋಷದಿಂದ ನೋಡಿ ಹಿರಿಹಿರಿ ಹಿಗ್ಗುತಿದ್ದರೆ, ಅಲ್ಲೇ ಇದ್ದ ಇತರ ಮಕ್ಕಳು ತಾವು ಅವನೆತ್ತರಕ್ಕೆ ಹಾರಿಸಬೇಕೆಂದು ಹಟದಲ್ಲಿ ಬಿದ್ದಿದ್ದರು.
ಕೆಲವರು ಗಂಡಸರಂತೂ ಅದ್ಯಾವುದರ ಪರಿವೆಯಿಲ್ಲದೆ, ಯಾವುದೋ ಪಾರ್ಟಿ ಗೆ ಬಂದವರಂತೆ ತಮ್ಮ ಕೆಲಸ, ಬ್ಯುಸಿನೆಸ್, share ಮಾರ್ಕೆಟ್, ಪೊಲಿಟಿಕ್ಸ್ ಹೀಗೆ ತಮ್ಮದೇ ಗಾಂಭೀರ್ಯದಲ್ಲಿ ತಮ್ಮ ಸಹವರ್ತಿಗಳೊಡನೆ ಮಾತನಾಡುತ್ತ ಇದ್ದಾರೆ..
ಇತ್ತ ಅದೇ ಊರಿನಲ್ಲಿನ ಜನರು 'ಕಡಲು' ನಮಗೆ ಸಾಮಾನ್ಯ ಎಂಬ ಮನಸ್ಠಿತಿಯೊಂದಿಗೆ ಅಲ್ಲೇ ದೂರದಲ್ಲಿ ತಮ್ಮ ಕೆಲಸದೊಂದಿಗೆ ಓಡಾಡುತಿದ್ದಾರೆ..
ಹಾಗೆ ಇದೆಲ್ಲವನ್ನು ಅಕ್ಷಿ ಪಟಲದಲ್ಲಿ ತುಂಬಿಕೊಂಡು ನಾನು ಮತ್ತು ಗೆಳೆಯ ಮುಂದೆ ಹೋಗುತಿರಬೇಕಾದರೆ ಅಲ್ಲೇ ದೂರದಲ್ಲಿ ಮರಳ ರಾಶಿ ಕಂಡು ಕುತೂಹಲಗೊಂಡು ಅದರತ್ತ ಹೋದೆವು.. ಅಲ್ಲಿ ಅಗಾಧ ಮರಳರಾಶಿಯ ಮಧ್ಯ ದೊಡ್ಡ ಹೊಂಡ ತೆಗೆದಿತ್ತು.. ಅದೊರಳಗೆ ಒಂದು ಹಿಟಾಚಿ ಮತ್ತೊಂದು boat ಇತ್ತು.. ಅಲ್ಲಿಯ ಮರಳು ಎಲ್ಲಿ ಹೋಗಿದೆಯೆಂದು ಚಿಂತಿಸುವಾಗ, ಮೂರೂ ಜನ ನಮ್ಮನ್ನು ಯಾವುದೋ ಊರಿನ ಜಮೀನ್ದಾರರು ಅನ್ನುವಂತೆ ನೋಡುತಿದ್ದರು.. ಅವರಲ್ಲಿ ಈ ಬಗೆ ಕೇಳಿದಾಗ 'ಗೊತ್ತಿಲ್ಲ' ಅನ್ನೋ ಸಿದ್ದ ಉತ್ತರ ಬಂತು. 'ನೀವು ಎಲ್ಲಿಯವರಪ್ಪ' ಅಂತ ಕೇಳಿದಾಗ.. ತಮ್ಮ ಹೊಟ್ಟೆಪಾಡಿಗಾಗಿ ದೂರದ ಜಾರ್ಖಂಡ ನಿಂದ ಇಲ್ಲಿಗೆ ಬಂದು ಇದೇ ಮರಳ ಗುಂಡಿಯಲ್ಲಿ ಕಾರ್ಮಿಕ ಆಗಿ ದುಡಿಯುತಿದ್ದಾರೆ. ಅದರಲ್ಲೊಬ್ಬ ಹೇಳಿದ ಇಲ್ಲಿಂದ ಮರಳನ್ನು ಸಮುದ್ರಡೆಗೆ ಕೊಂಡೊಯ್ಯುತ್ತಾರೆಂದ. ಅಲ್ಲೇ ದೂರದಲ್ಲಿ, ಸಮುದ್ರದಲ್ಲಿ ಅದೇನೋ ಪೋರ್ಟ್ ಗೆ ಸಂಬಂದಿಸಿದ ಕೆಲಸ ನಡೆಯುತಿದೆ.. ಇನ್ನು ಈ ಕಡೆ ಬರಲು ಅಸಾಧ್ಯವೋ ಏನೋ ಎಂದು ಯೋಚಿಸುತ್ತ ಅಲ್ಲಿಂದ ಕಾಲ್ತೆಗೆದೆವು.. ಅತ್ತ ಸೂರ್ಯ ತನ್ನ ಪ್ರಿಯತಮೆಯಲ್ಲಿ ಅನುರಕ್ತನಾಗಿ, ಇಬ್ಬರು ಗಾಢಾಲಿಂಗನದಲ್ಲಿದ್ದಂತೆ ತೋರಿತು..
ಅವರಿಗ್ಯಾಕೆ ತೊಂದರೆ ಕೊಡುವುದೆಂದು ಅಲ್ಲಿಂದ ಹಿಂದಿರುಗಿ ಬರುವಾಗ, ಮರಳಲ್ಲಿ ಜತೆ ಜತೆ ಯಾಗಿ ಕುಳಿತಿದ್ದ ಪ್ರೇಮಿಗಳು ಸಮಾಧಿ ಸ್ತಿತಿ ಅಂದ್ರೆ ಸೂರ್ಯ- ಸಮುದ್ರದ ಸ್ತಿತಿಯಲ್ಲಿದ್ದರು.. ಹೆಂಗಸರು ತಮ್ಮ ಗಂಡಂದಿರ ಹಿಂದೆ ಹೊರಡಲನುವಾಗುತಿದ್ದರು. ಹುಡುಗನೊಬ್ಬ ಮೇಲೆ ಹಾರಿಸುತಿದ್ದ ಗಾಳಿಪಟ ತನ್ನ ದಾರದೊಂದಿಗಿನ ಸಂಬಂದ ಕಡಿದು, ತನಗೂ ಅವನಿಗೂ ಪರಿಚಯವೇ ಇಲ್ಲದ ಹಾಗೆ ಗಾಳಿಯಲ್ಲಿ ತೇಲಿ ಹೋಗುತ್ತಾ ಇದ್ದ ದೃಶ್ಯವನ್ನು ಬೇಸರದಿಂದ ನೋಡುತ್ತಾ ಇದ್ದ. ಇದನ್ನು ನೋಡಿದ ಇತರ ಮಕ್ಕಳು ತಮ್ಮ ಹಾರಿಸಲಾಗದೆ ಇದ್ದ ಗಾಳಿಪಟವನ್ನು ಇನ್ನಷ್ಟು ಬಿಗಿಯಾಗಿ ಹಿಡಿದು ಕೊಂಡು ತಮ್ಮ ಕಾರಿನತ್ತ ಹೋಗುವಾಗ ಅವರ ಮುಖದಲ್ಲಿ ನೆಮ್ಮದಿಯ ನಿಟ್ಟುಸಿರು ಕಾಣುತಿತ್ತು.. ಇದೆಲ್ಲವನ್ನು ನೋಡುತ್ತಾ ನಾನು ಮತ್ತು ಗೆಳೆಯ ಅಲ್ಲಿಂದ ಹೊರಡಲನುವಾದೆವು..
ಅಲ್ಲೇ ಪೂರ್ವದಲ್ಲಿ, ಸ್ವಲ್ಪ ದೂರದಲ್ಲಿ ಫಲ್ಗುಣಿ ನದಿ ಪ್ರಶಾಂತವಾಗಿ ಕಡಲಿನೆಡೆಗೆ ಹರಿಯುತಿತ್ತು. ತಂಗಾಳಿ ಇನ್ನಷ್ಟು ಜೋರಾಗಿ ಬೀಸುತಿತ್ತು .. ಅದನ್ನು ದೂರದ ಊರಿಂದೆಲ್ಲಿಂದಲೋ ಬಂದ ಒಂದಷ್ಟು ಜನ ನೋಡುತ್ತಾ ನಿಂತಿದ್ದನು ನೋಡಿ ಗೆಳೆಯ ನನ್ನಲ್ಲಿ '' ಇವರು ತಮ್ಮ ಊರಿಗೆ ಹೋಗಿ ಈ ನದಿಯನ್ನೇ ಸಮುದ್ರ ಎಂದು ಬಣ್ಣಿಸದಿದ್ದರೆ ಸಾಕು ಅಂತ'' ಹೇಳಿ ಗೇರ್ ಬದಲಾಯಿಸಿದ..